ಕಿರೀಟಿಕ ಕೂಡುಗರಣಿಕೆ

ಗುಂಡಿಗೆಯ ಮೇಲುಗಡೆ ಕಿರೀಟದಂತೆ ಸುತ್ತುವರಿದಿರುವ ಧಮನಿ (ಆರ್ಟರಿ) ಒಂದರೊಳಗಡೆ ರಕ್ತ ಗರಣೆಗಟ್ಟಿ ಕೂಡುತ್ತ ಹೋಗಿ ಕೊನೆಗೆ ಉಂಟಾಗುವ ಅಡಚಣೆ (ಕಾರೊನರಿ ತ್ರಾಂಬೊಸಿಸ್). ಗುಂಡಿಗೆ ಶೂಲೆ ಕಾಣಿಸಿಕೊಂಡು ಕೆಲವೇಳೆ ಇದ್ದಕ್ಕಿದ್ದಂತೆ ಸಾವೊದಗುವ ಈ ರೋಗಲಕ್ಷಣಕ್ಕೆ ಈ ಹೆಸರನ್ನು ಮೊದಲು ಸೂಚಿಸಿದವ ಅದಾಂ ಹ್ಯಾಮರ್. ಧಮನಿಯಲ್ಲಿ ರಕ್ತದ ಹರಿವಿಗೆ ಅಡ್ಡಿಯಾದರೆ, ರಕ್ತದ ಪೂರೈಕೆ ಕಡಿದಂತಾಗಿ ಅದರಾಚೆ ಇರುವ ಗುಂಡಿಗೆಯ ಆ ಭಾಗ ನಿರ್ಜೀವಗೊಳ್ಳುವುದು. ಧಮನಿಯ ಅಂಬಲಿಪೆಡಸಣೆ (ಅಥೆರೊಸ್ಕ್ಲೀರೊಸಿಸ್) ನಿಂದ ಒಳ ಅಳತೆ ಆಗಲೇ ಕಿರಿದಾಗಿ ಗಡುಸಾಗಿರುವ ಧಮನಿಯಲ್ಲಿ ಹೀಗಾಗುವುದು ಸಾಮಾನ್ಯ. ಒಂದು ಧಮನಿಗೆ ಹೀಗೆ ಅಡ್ಡಿಯಾದರೆ ಪಕ್ಕದ ಇನ್ನೊಂದು ಧಮನಿಯ ಕಿರಿಗವಲುಗಳು ಕೆಲವು ವಾರಗಳಲ್ಲಿ ಈ ಕೆಲಸವನ್ನು ಎತ್ತಿಕೊಳ್ಳುವುವು. ಕೆಲವು ತಿಂಗಳಲ್ಲಿ ಬಹು ಮಟ್ಟಿಗೆ ಎಂದಿನಂತೆ ರಕ್ತಪೂರೈಕೆಯಾಗಿ ಸ್ನಾಯುವಿನ ನಿರ್ಜೀವಗೊಂಡಭಾಗ ಚೇತರಿಸಿಕೊಂಡು ವಾಸಿಯಾಗಿ ಕಲೆಗಟ್ಟುವುದು. ಈ ಇನ್ನೊಂದು ಧಮನಿ ಸಾಕಷ್ಟು ಹೆಚ್ಚಿನ ಕೆಲಸ ವಹಿಸುವಂತಾದರೆ ರೋಗಿ ಬದುಕಿ ಉಳಿಯುವನು. ಇಲ್ಲವಾದರೆ ಅಸುನೀಗುವನು. ಕಿರೀಟಿಕ ಕೂಡುಗರಣಿಕೆಗೆ ಮೊದಲಬಾರಿ ಗುರಿಯಾದ ರೋಗಿಗಳಲ್ಲಿ ನೂರಕ್ಕೆ 80 ಮಂದಿ ಬದುಕಿಕೊಳ್ಳುತ್ತಾರೆ.

(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ